ಈಡಿಗ ಸಮಾಜದ ಸಂಘಟನೆಗೆ ಶ್ರಮಿಸಿದವರಲ್ಲಿ ಪ್ರಮುಖರು:

ರಾವ್ ಸಾಹೇಬ್ ಕಣೇಕಲ್ ನೆಟ್ಟಕಲ್ಲಪ್ಪ
ಕರ್ನಾಟಕದ ಈಡಿಗ ಜನಾಂಗದ ಸಂಘಟನೆಯ ಮೊದಲ ಪುಟ ಇವರಿಂದಲೇ ಆರಂಭವಾಗುತ್ತದೆ.. ಬಳ್ಳಾರಿ ಕೇಂದ್ರವನ್ನಾಗಿಸಿಕೊಂಡು ವ್ಯಾಪಾರ ವಿಸ್ತರಿಸಿದ್ದ ಆಗರ್ಭ ಶ್ರೀಮಂತರು , ಕೊಡುಗೈ ದಾನಿ, ಸಾಹಸಿ ಉದ್ಯಮಿ ,ಕರ್ನಾಟಕದಲ್ಲಿ ಈಡಿಗ ಜನಾಂಗದ ಸಂಘಟನೆಗೆ ಕಾರಣೀಭೂತರಾದರು. ಈಡಿಗ ಜನಾಂಗಕ್ಕೆ ಮೊದಲ ವಿದ್ಯಾರ್ಥಿನಿಲಯ ಸೌಲಭ್ಯವನ್ನು 1914 ಫೆಬ್ರವರಿ 28 ರಂದು ಬಳ್ಳಾರಿಯಲ್ಲಿ ಆರಂಭಿಸಿದರು. ಮೂಲಾ ವೆಂಕಟಸ್ವಾಮಿ ,ಮುರಾರಿ ವೆಂಕಟಸ್ವಾಮಿ, ಕೆ. ವೆಂಕಟಸ್ವಾಮಿ, ಹೆಚ್. ಅರ್. ಗವಿಯಪ್ಪ ರಂತಹ ಅನೇಕ ದಿಗ್ಗಜರಿಗೆ ಆದರ್ಶಪ್ರಾಯರಾಗಿ ಸಮಾಜ ಸೇವೆಯಲ್ಲಿ ಗುರುತಿಸಿಕೊಳ್ಳುವಂತೆ ಪ್ರೇರಣೆಯಾಗಿದ್ದರು. 1920 ರಲ್ಲಿ ಬೆಂಗಳೂರಿಗೆ ತಮ್ಮ ವ್ಯಾಪಾರ ಉದ್ಯಮವನ್ನು ಸ್ಥಳಾಂತರಿಸಿದ ನಂತರ, ಬೆಂಗಳೂರು ನಗರದಲ್ಲಿ ಈಡಿಗ ಜನಾಂಗದ ಸಂಘಟನೆ ಚುರುಕುಗೊಂಡಿತು. ಅವರ ಸುಪುತ್ರರಾದ ಶ್ರೀ ಕೆ.ವಿ. ಗುರುಸ್ವಾಮಿ ಅವರು ತಮ್ಮ ಒಡನಾಡಿಗಳೊಂದಿಗೆ “ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘ”ವನ್ನು 1944 ರಲ್ಲಿ ಪ್ರಾರಂಭಿಸಿದರು.

ಕೆ.ಎನ್. ಗುರುಸ್ವಾಮಿ
1944ರಲ್ಲಿ ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘ ಬೆಂಗಳೂರಿನಲ್ಲಿ ಪ್ರಾರಂಭವಾಗಲು ಕಾರಣೀಭೂತರಾದವರು. ಅಂದಿನ ಕಾಲದ ಸಮಾಜಸೇವಕರು, ಆಗರ್ಭ ಶ್ರೀಮಂತರಾಗಿದ್ದ ಗುರುಸ್ವಾಮಿಯವರು ಸಮಾಜದ ಶ್ರೇಯಸ್ಸಿಗಾಗಿ ಕಂಕಣಬದ್ಧರಾಗಿ ದುಡಿದ ಮಹನೀಯರು. ಬೆಂಗಳೂರಿನಲ್ಲಿ ಈಡಿಗ ಜನಾಂಗದ ಸಂಘಟನೆ, ಸಂಘ ಸ್ಥಾಪನೆ, ವಿದ್ಯಾರ್ಥಿ ನಿಲಯ ಸ್ಥಾಪನೆ ಮೂಲಕ ಕರ್ನಾಟಕ ರಾಜ್ಯದಲ್ಲಿ ಈಡಿಗ ಜನಾಂಗಕ್ಕೆ ಒಂದು ಗುರುತನ್ನು ಮೂಡಿಸಿದವರು. ಇವರು ಆರಂಭಿಸಿದ *ಪ್ರಜಾವಾಣಿ* ಪತ್ರಿಕೆ ಸಮುದಾಯಕ್ಕೆ ಹೆಮ್ಮೆಮಾತ್ರವಲ್ಲದೆ, ಕನ್ನಡದ ಅಸ್ಮಿತೆಯಾಗಿದೆ.

ಕೆ. ವೆಂಕಟಸ್ವಾಮಿ
ಕರ್ನಾಟಕ ಈಡಿಗ ಜನಾಂಗದ ಸಂಘಟನೆಯ ಜೋಡೆತ್ತುಗಳು ಎಂದು ಗುರುತಿಸಿಕೊಂಡವರು. ಕೆ ವೆಂಕಟಸ್ವಾಮಿ ಅವರು ಉದ್ಯಮಿಯಾಗಿ, ಯಶಸ್ವಿ ಸಂಘಟನಕಾರರಾಗಿ ತಮ್ಮ ಬುದ್ಧಿವಂತಿಕೆ ,ಅಪಾರ ಸಂಘಟನಾ ಸಾಮರ್ಥ್ಯದಿಂದ ಈಡಿಗ ಜನಾಂಗದ ಸಂಘಟನೆಯಲ್ಲಿ ಉನ್ನತ ಸ್ಥಾನಗಳಿಸಿಕೊಂಡವರು. ಬೆಂಗಳೂರಿನಲ್ಲಿ ವಿದ್ಯಾರ್ಥಿ ನಿಲಯ ಸ್ಥಾಪನೆ, ಈಡಿಗ ಜನಾಂಗದ ಮಹಾ ಸಮ್ಮೇಳನಗಳ ಸಂಘಟನೆ ಹಾಗೂ ಸಮಾಜಸೇವೆಯಲ್ಲಿ ಗುರುತಿಸಿಕೊಂಡು ಜನಾಂಗದ ಕಳಶಪ್ರಾಯರಾಗಿದ್ದವರು. ರಾಜಕಾರಣಿಗಳು, ಸಮಾಜ ಸೇವಕರು, ಅನೇಕ ಶ್ರೇಷ್ಠ ಸಾಧಕರ ಒಡನಾಡಿಯಾಗಿದ್ದ ಕೆ ವೆಂಕಟಸ್ವಾಮಿ ಅವರು ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಚಿಕ್ಕ ಜೋಗಿಹಳ್ಳಿ ಯನ್ನು ಮಾದರಿ ಗ್ರಾಮವನ್ನಾಗಿ ನಿರ್ಮಿಸಿ ಪ್ರಸಿದ್ಧಿಯಾದವರು.

ಕೆ. ಎ. ನೆಟ್ಟಕಲ್ಲಪ್ಪ
ರಾವ್ ಸಾಹೇಬ್ ನೆಟ್ಟಕಲ್ಲಪ್ಪನವರ ಮೊಮ್ಮಗನಾಗಿದ್ದ ಶ್ರೀ ಕೆ. ಎ. ನೆಟ್ಟಕಲ್ಲಪ್ಪನವರು ಪ್ರಜಾವಾಣಿ ಪತ್ರಿಕೆಯನ್ನು ಮುಂದುವರಿಸಿಕೊಂಡು ಯುವ ಉದ್ಯಮಿಯಾಗಿ ಗುರುತಿಸಿಕೊಂಡವರು. ಕರ್ನಾಟಕ ಪ್ರದೇಶ ಯುವಕ ಸಂಘದ ಅಧ್ಯಕ್ಷರಾಗಿ ತಮ್ಮ ಹಿರಿಯರು ಹಾಕಿಕೊಟ್ಟ ಹಾದಿಯಲ್ಲಿ ಜನಾಂಗದ ಸಂಘಟನೆಯನ್ನು ಮುಂದುವರಿಸಿದರು. ಸಮಾಜದ ಯುವಕರು ಜನಾಂಗದ ಸಂಘಟನೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕೆಂಬ ಅಪೇಕ್ಷೆ ಉಳ್ಳವರಾಗಿದ್ದರು. ಈಡಿಗ ಜನಾಂಗದ ಸಂಘಟನೆಯಲ್ಲಿ ಹೆಚ್ಚು ತೊಡಗಿಸಿಕೊಂಡವರು.

ಎಚ್.ಆರ್. ಬಸವರಾಜ್
80 ರ ದಶಕದ ಕರ್ನಾಟಕ ರಾಜ್ಯದ ಆಗರ್ಭ ಶ್ರೀಮಂತರು. ಉದ್ಯಮಿಯಾಗಿದ್ದ ಶ್ರೀ ಎಚ್.ಆರ್ ಬಸವರಾಜ್ ಅವರು 1989- 99 ರವರೆಗೆ ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. 1995ರಲ್ಲಿ ಬೆಂಗಳೂರು ಅರಮನೆ ಮೈದಾನದಲ್ಲಿ ಮೂರನೇ ಈಡಿಗ ಮಹಾ ಸಮ್ಮೇಳನವನ್ನು ನಡೆಸಿದ ಕೀರ್ತಿ ಎಚ್. ಆರ್. ಬಿ ಅವರಿಗೆ ಸಲ್ಲುತ್ತದೆ. ಎಚ್. ಆರ್. ಬಿ. ಅವರು ಶ್ರೀ ಜಾಲಪ್ಪನವರು, ಶ್ರೀ ದಾಸಪ್ಪನವರ ಸಹಕಾರದಿಂದ ಕರ್ನಾಟಕ ರಾಜ್ಯದಲ್ಲಿ ಈಡಿಗ ಜನಾಂಗದ ಯಶಸ್ವಿಗಾಗಿ ಶ್ರಮಿಸಿದರು.

ಡಿ.ದಾಸಪ್ಪ
ಅಬಕಾರಿ ಉದ್ಯಮಿಯಾಗಿ ಸಮಾಜ ಸೇವಕರಾಗಿ ಆರ್ಯ ಈಡಿಗ ಸಂಘದ ರಾಜ್ಯ ಅಧ್ಯಕ್ಷರಾಗಿ (1999–2008) ಕಾರ್ಯ ನಿರ್ವಹಿಸಿದರು. ಅವರ ನಿಕಟವರ್ತಿಗಳಾಗಿದ್ದ ಶ್ರೀ ಜೆ.ಪಿ. ನಾರಾಯಣಸ್ವಾಮಿ ಅವರು ಶ್ರೀ ಡಿ. ದಾಸಪ್ಪನವರ ಸೇವಾ ಕಾರ್ಯಕ್ಕೆ ಬೆಂಬಲವಾಗಿ ನಿಂತಿದ್ದರು.ಶ್ರೀ ಡಿ.ದಾಸಪ್ಪನವರ ನೇತೃತ್ವದಲ್ಲಿ ಸರ್ಕಾರದಿಂದ ಸಂಘಕ್ಕೆ ನಿವೇಶನಗಳು ದೊರೆತವು. ದಾವಣಗೆರೆ ,ಶಿವಮೊಗ್ಗ ಜಿಲ್ಲಾ ಕೇಂದ್ರಗಳಲ್ಲಿ ವಿದ್ಯಾರ್ಥಿ ನಿಲಯಗಳು ತಲೆಯೆತ್ತಿದವು. ಬೆಂಗಳೂರಿನಲ್ಲಿ ಮಹಿಳಾ ವಿದ್ಯಾರ್ಥಿ ನಿಲಯವನ್ನು ಪ್ರಾರಂಭಿಸಬೇಕು ಎಂಬ ಸಮಾಜದ ಸಂಕಲ್ಪ ದಾಸಪ್ಪನವರ ನೇತೃತ್ವದಲ್ಲಿ ಈಡೇರಿತು.

ಜೆ.ಪಿ ನಾರಾಯಣಸ್ವಾಮಿ
ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಜವರೇಗೌಡನ ಪಾಳ್ಯ ಹಳ್ಳಿಯಲ್ಲಿ ಜನಿಸಿದ ಜೆ.ಪಿ. ನಾರಾಯಣಸ್ವಾಮಿ ಅವರು ರಾಜ್ಯದ ಪ್ರತಿಷ್ಠಿತ ಉದ್ಯಮಿಯಾಗಿ ಬೆಳೆದದ್ದು ಇತಿಹಾಸ. ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘದ ಅಧ್ಯಕ್ಷರಾದ ನಂತರ ಸಂಘಟನೆ ಗೆ ಹೊಸ ರೂಪ ನೀಡಿದವರು. ಅನೇಕ ಜಿಲ್ಲೆಗಳಲ್ಲಿ ವಿದ್ಯಾರ್ಥಿ ನಿಲಯ ಸ್ಥಾಪನೆ ಮಾಡಿ, ಜನಾಂಗದ ಸಂಘಟನೆ ಚುರುಕುಗೊಳಿಸಿದರು. ಸೋಲೂರಿನಲ್ಲಿ ದೇವಸ್ಥಾನ ಸ್ಥಾಪನೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವ ಅಕಾಡೆಮಿ, ರೇಣುಕಾ ಪೀಠ ಸ್ಥಾಪನೆ, ಕುಲ ಗುರುಗಳ ನೇಮಕ, ಸಾಮೂಹಿಕ ವಿವಾಹಗಳು, ಸಮಾಜದ ಅನೇಕರಿಗೆ ಸಹಾಯ ಮಾಡುವುದರ ಮೂಲಕ ಯಶಸ್ವಿ ಸಮಾಜಸೇವಕರೆಂದು ಗುರುತಿಸಿಕೊಂಡವರು. ಪ್ರತ್ಯಕ್ಷ ರಾಜಕಾರಣದಿಂದ ದೂರ ಉಳಿದರೂ ಕೂಡ ಅನೇಕ ರಾಜಕಾರಣಿಗಳಿಗೆ ಬೆನ್ನೆಲುಬಾಗಿ ನಿಂತು ಗಾಡ್ ಫಾದರ್ ಎನಿಸಿದ್ದರು.ಈಗ ಅವರ ಸುಪುತ್ರರಾದ ಶ್ರೀ ಜೆ.ಪಿ. ಸುಧಾಕರ್ ರವರು ಜೆ.ಪಿ. ನಾರಾಯಣಸ್ವಾಮಿ ಪ್ರತಿಷ್ಠಾನ ಹೆಸರಿನಲ್ಲಿ ಅವರ ಸೇವೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಡಾ.ಎಂ.ತಿಮ್ಮೇಗೌಡ
ಪ್ರಸ್ತುತ ಕರ್ನಾಟಕ ಪ್ರದೇಶ ಈಡಿಗ ಸಂಘದ ಅಧ್ಯಕ್ಷರಾಗಿರುವ ಡಾ.ಎಂ. ತಿಮ್ಮೇಗೌಡ ಅವರು ಸಾಹಸಿ ಉದ್ಯಮಿಯಾಗಿ, ಸಮಾಜ ಸೇವಕರಾಗಿ ಗುರುತಿಸಿಕೊಂಡವರು.ಶ್ರೀ ಜೆ. ಪಿ.ನಾರಾಯಣಸ್ವಾಮಿ ಅವರ ನಂತರ 2017 ರಲ್ಲಿ ಸಂಘದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡರು. . ಸೋಲೂರು ರೇಣುಕಾ ಪೀಠಕ್ಕೆ ವಿಖ್ಯಾತಾನಂದ ಶ್ರೀಗಳನ್ನು ಪೀಠಾರೋಹಣ ಗೊಳಿಸಿದರು. ರಾಜ್ಯದಲ್ಲಿ ಹಲವು ವಿದ್ಯಾರ್ಥಿ ನಿಲಯ ನಿರ್ಮಾಣದಲ್ಲಿ ಸಹಕಾರ ನೀಡಿ ಕಟ್ಟಡಗಳ ಉದ್ಘಾಟನಾ ಕಾರ್ಯ ನೆರವೇರಿಸಿದ್ದಾರೆ. ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಸಮಾಜಕ್ಕೆ ದೊರಕಿಸುವ ನಿಟ್ಟಿನಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಟಿ.ವಿ. ವೆಂಕಟಸ್ವಾಮಿ,
ಇ. ಹನುಮಂತಯ್ಯ,
ನಿಡಘಟ್ಟ ಎ. ಅಣ್ಣೇಗೌಡ,
ಸಾಹುಕಾರ್ ಕೊರಗಪ್ಪ ಮಂಗಳೂರು,
ರಾವ್ ಬಹಾದ್ದೂರ್ ಸುವರ್ಣ ಮಂಗಳೂರು,
ಕುಂಬತ್ತಿ ಭೈರನಾಯ್ಕರು,
ಮೂಗುಡ್ತಿ ಗ್ರಾಮದ ಕೊಡಸೆಯ ಕರೇನಾಯ್ಕರು,
ಎಚ್. ಜಿ. ರಾಮುಲು,
ಗೋಸಾಯಿ ತಿಮ್ಮಯ್ಯ ಹಿರಿಯೂರು
ಕಣೇಕಲ್ ಹನುಮಂತಪ್ಪ,
ಎಂ. ವೀರಪ್ಪ,
ಗಾಡಿ ಗಣಪತಿಯಪ್ಪ,
ಎಚ್. ಅಜ್ಜಪ್ಪ,
ಮೊಗೇನಹಳ್ಳಿ ಕೆಂಚೇಗೌಡ,
ಎಂ. ಕೆ. ಶ್ರೀನಿವಾಸ್ ಮೈಸೂರು,
ಎಂ. ರಂಗಮಣಿಪುರ,
ಮಲ್ಲಪ್ಪ ಕೆ. ಶಿಂಧೆ,
ಗಂಗಾಧರದಾಸ್ ಮಂಗಳೂರು
ಪಿ. ಎನ್.ಗೌಡ,
ಮುರಾರಿ ವೆಂಕಟಸ್ವಾಮಿ,
ಎಚ್. ಆರ್. ಗವಿಯಪ್ಪ,
ಶ್ರೀಮತಿ ಕದಿರಮ್ಮ,
ಮೊಗೇನಹಳ್ಳಿ ಕೆ. ತಮ್ಮಣ್ಣಗೌಡ,
ಎಂ. ಕೆ. ಪಾಣಿ ಹರಿಹರ,
ದಾದೂ ಮಾಸ್ಟರ್ ಕಾಪು,
ದಯಾನಂದ ಕಲ್ಲೆ ಕಾರ್ಕಳ,
ದಾಮೋದರ ಆರ್. ಸುವರ್ಣ ಮಂಗಳೂರು,
ಮೂಲಾ ವೆಂಕಟಸ್ವಾಮಿ,
ಚಿಕ್ಕಗುರುವಯ್ಯ,
ಮೂಲಾ ರಂಗಪ್ಪ,
ಎಂ. ಕೆ. ನಾರಾಯಣಸ್ವಾಮಿ ಹಾಸನ,
ಕೆ. ದೂಮಪ್ಪ ಕಂಕನಾಡಿ,
ಅಶೋಕ್ ಶಿಂಧೆ,
ಎನ್. ಎನ್. ಸುವರ್ಣ,
ಕೆ. ಅನಂತರಾಮಗೌಡ,
ಕೆ. ಎಸ್. ದತ್ತಾತ್ರೇಯ,
ಗಂದ್ರಳ್ಳಿ ಧರ್ಮನಾಯ್ಕರು.
ಈಡಿಗರು ರಾಜ್ಯದ ಜನಸಂಖ್ಯೆಯ 5 ನೇ ಸ್ಥಾನದಲ್ಲಿದ್ದರೂ, ರಾಜಕೀಯ, ಆರ್ಥಿಕ, ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕವಾಗಿ ಬೆಳವಣಿಗೆಗಳನ್ನು ಅಲ್ಲಲ್ಲಿ ಕಾಣಬಹುದೇ ವಿನಃ ಸಾಮೂಹಿಕ ಅಭಿವೃದ್ಧಿಯನ್ನು ಸಾಧಿಸಲಾಗಿಲ್ಲ. 1954 ರಷ್ಟು ಹಿಂದೆಯೇ ನಾವೆಲ್ಲರೂ ಒಂದೇ ಎಂಬ ಘೋಷಣೆಯಾಗಿದ್ದರೂ ಅದು ಕಾರ್ಯರೂಪಕ್ಕೆ ಬಂದಿಲ್ಲ. ಸ್ವಾತಂತ್ರ್ಯಪೂರ್ವದಲ್ಲಿ ಈಡಿಗ ಸಮುದಾಯಕ್ಕೆ ಸೇರಿದ ಮುಖಂಡರು ಮೈಸೂರು ಪ್ರಜಾಪ್ರತಿನಿಧಿ ಸಭೆಗೆ ಆಯ್ಕಯಾಗಿದ್ದ ಬಗ್ಗೆ ಹೆಚ್ಚಿನ ವಿವರಗಳಿಲ್ಲ. ಆದರೆ ಹಿಂದಿನ ಬ್ರಿಟಿಷ್ ಸರ್ಕಾರದಿಂದ ಕಣೇಕಲ್ ನೆಟ್ಟಕಲ್ಲಪ್ಪ ಮತ್ತು ಮಂಗಳೂರಿನ ಎನ್.ಎನ್.ಸುವರ್ಣ ಅವರು ರಾವ್ ಸಾಹೇಬ್ ಬಿರುದನ್ನು ಪಡೆದುಕೊಂಡವರೆಂದು ಹೇಳಲಾಗಿದೆ.