ರಾಜ್ಯಾಧ್ಯಕ್ಷರು
ನನ್ನೆಲ್ಲಾ ಆತ್ಮೀಯ ಈಡಿಗ ಅಧಿಕಾರಿ-ನೌಕರ ಬಾಂಧವರೇ,
“ವಿದ್ಯೆಯಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲಯುತರಾಗಿ”
ಎನ್ನುವ ಗುರುವಾಣಿಯ ಪ್ರೇರೇಪಣೆಯಂತೆ 2005 ರಲ್ಲೇ ಹಿರಿಯ ಅಧಿಕಾರಿಗಳಾದ ಶ್ರೀ ಜಗದೀಶ್ ಪ್ರಸಾದ್, ಶ್ರೀ ಶಿವಾನಂದ, ಶ್ರೀ ಮೋಹನ್‌ದಾಸ್ ಮತ್ತು ಹಿರಿಯ ಹಲವು ಅಧಿಕಾರಿ-ನೌಕರರ ದೂರ ದೃಷ್ಟಿಯಿಂದ ಹಾಗೂ ಆಸಕ್ತ ಮನಸ್ಸುಗಳ ಸಹಕಾರದಿಂದಾಗಿ ಈ ಸಂಘ ಅಸ್ತಿತ್ವಕ್ಕೆ ಬರುವುದರೊಂದಿಗೆ, ಸುಮಾರು 800 ಜನ ಸದಸ್ಯತ್ವ ಪಡೆದಿದ್ದರು.
ನಿಮ್ಮೆಲ್ಲರ ಸಹಕಾರ ಮತ್ತು ಮಾರ್ಗದರ್ಶನದಂತೆ ಈ ಸಂಘದ ಅಧ್ಯಕ್ಷ ಹುದ್ದೆಯನ್ನು ಸ್ವೀಕರಿಸಿದ ನಂತರ ಒಂದಷ್ಟು ಸಮಾನ ಮನಸ್ಕ ಅಧಿಕಾರಿ-ನೌಕರ ಬಾಂಧವರ ಹಾಗೂ ಹಲವು ಹಿರಿಯ ನಿವೃತ್ತ ಅಧಿಕಾರಿಗಳೊಂದಿಗೆ ಮತ್ತು ಸಂಘದ ಪದಾಧಿಕಾರಿಗಳೊಂದಿಗೆ ಸಮಾಲೋಚಿಸಿ, ಸಂಘದ ಸದಸ್ಯ ಬಲವನ್ನು ಹೆಚ್ಚಿಸುವ ಮೂಲಕ ಈಗಾಗಲೇ ಅಸ್ತಿತ್ವದಲ್ಲಿರುವ ಈ ಸಂಘಕ್ಕೆ ಹೊಸತನ, ಹೊಸ ರೂಪುರೇಷೆ ಕೊಡಲು ತೀರ್ಮಾನಿಸಲಾಯಿತು.
ಸಂಘದ ಪ್ರಾದೇಶಿಕ ವ್ಯಾಪ್ತಿಯನ್ನು ನೈಜವಾಗಿ ರಾಜ್ಯಾದ್ಯಂತ ವಿಸ್ತರಿಸಬೇಕು ಎಂಬ ನಿಟ್ಟಿನಲ್ಲಿ, ನಮ್ಮವರಲ್ಲಿ ಒಂದು ಅಂದಾಜಿನಂತೆ, 25000 ಕ್ಕೂ ಹೆಚ್ಚು ಅಧಿಕಾರಿ-ನೌಕರರಿರುವುದರಿಂದ ಅವರೆಲ್ಲರೂ ಸದಸ್ಯತ್ವ ಪಡೆಯುವಂತೆ ಮಾಡುವ ಮೂಲಕ ಸಂಘದ ನಿಜವಾದ ಶಕ್ತಿಯನ್ನು ಪರಿಚಯಿಸಬೇಕು ಎಂದು ಸಂಕಲ್ಪ ಮಾಡಿದ್ದೇವೆ. ಈ ಮೂಲಕ ಇಂತಹ ಸಂಘ ಎಲ್ಲಾ ವಿಧದಲ್ಲೂ, ಎಲ್ಲಾ ರೀತಿಯಲ್ಲೂ ಮಾದರಿ ಮತ್ತು ಪ್ರೇರಣಾಯುತವಾದ ಕಾರ್ಯಗಳನ್ನು ಮಾಡಬೇಕು ಎನ್ನುವ ಗುರಿ ನಿಶ್ಚಯಿಸಿದೆವು.
ಅದಕ್ಕಾಗಿಯೇ ನಮ್ಮ ಸಂಘಕ್ಕೆ, ತನ್ಮೂಲಕ ನಮ್ಮವರ ಅಸ್ತಿತ್ವದಲ್ಲಿರುವ ಎಲ್ಲಾ ರೀತಿಯ ಸಂಘಗಳಿಗೆ ತಿಳಿದಿರುವಂತವರಾದ ನಾವು ನಮ್ಮ ಅಧಿಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘವನ್ನು ಸರಿಯಾದ ದಿಕ್ಕಿನಲ್ಲಿ, ಸರಿಯಾದ ಮಾರ್ಗದಲ್ಲಿ ಮುನ್ನಡೆಸಲು-ನೌಕರ ಬಾಂಧವರ ನಿಸ್ವಾರ್ಥ ಸೇವೆಯ ಅವಶ್ಯಕತೆ ಇದೆ. ಅವರೆಲ್ಲರನ್ನು ಒಟ್ಟುಗೂಡಿಸೋಣ. ಈಡಿಗ ಎಂಬ ಮೂಲ ಹೆಸರಿನಲ್ಲಿ ಬಿಲ್ಲವ, ಪೂಜಾರಿ, ನಾಮಧಾರಿ, ದೀವರು, ಹಳೇಪೈಕ ಮುಂತಾದ 26 ಉಪಪಂಗಡಗಳ ಎಲ್ಲಾ ಅಧಿಕಾರಿ-ನೌಕರರನ್ನು ಒಗ್ಗೂಡಿಸಿ ಬಲಿಷ್ಠ ಸಂಘವನ್ನು ಕಟ್ಟೋಣ. ಈ ಹಿನ್ನೆಲೆಯಲ್ಲಿ ತಮಗೆಲ್ಲಾ ತಿಳಿದಿರುವಂತೆ, ರಾಜ್ಯಾದ್ಯಂತ ಜಿಲ್ಲಾಪ್ರವಾಸ, ತಾಲ್ಲೂಕು ಪ್ರವಾಸ, ನೇರ ಭೇಟಿ, ವಾಟ್ಸಾಪ್‌ಗುಂಪು, ಗೂಗಲ್‌ಮೀಟ್‌ಗಳ ಮೂಲಕ ಚಾಲನೆ ನೀಡಲಾಗಿದೆ. ಈ ಅತ್ಯಲ್ಪ ಅವಧಿಯಲ್ಲೇ ನಮ್ಮಲ್ಲಿ ಇರುವ ಘಟಾನುಘಟಿ ಅಧಿಕಾರಿಗಳು, ಚುರುಕಿನ ಪಾದರಸದಂತೆ ವ್ಯಕ್ತಿತ್ವವುಳ್ಳ ನೌಕರರನ್ನು ಕಂಡಿದ್ದೇನೆ. ಸಂಘದ ಕುರಿತು ತುಡಿತ ಇರುವುದನ್ನು ಮನಗಂಡಿದ್ದೇನೆ.
ಈ ಹಿನ್ನೆಲೆಯಲ್ಲಿ 26 ಉಪಪಂಗಡಗಳು ಬೇರೆ ಬೇರೆ ರೀತಿಯಲ್ಲಿ ಬಲಿಷ್ಠಗೊಂಡಿದ್ದರೂ ಅಥವಾ ಬಲಿಷ್ಠಗೊಳ್ಳದಿದ್ದರೂ ನಮ್ಮೆಲ್ಲರ ಆಶಯ ಎಲ್ಲರೂ ಒಗ್ಗೂಡುವುದೇ ಆಗಿದೆ. “ಸಣ್ಣ ಸಣ್ಣ ಸಮುದಾಯಗಳ ಪ್ರತ್ಯೇಕತೆಯು ಕ್ಷೇಮಾಭಿವೃದ್ಧಿ ಸಂಘವನ್ನು ದುರ್ಬಲಗೊಳಿಸುತ್ತದೆ, ಆದರೆ ಒಗ್ಗಟ್ಟು ಸಂಘವನ್ನು ಬಲಪಡಿಸುತ್ತದೆ”. ಆ ನಿಟ್ಟಿನಲ್ಲಿ ಎಲ್ಲಾ 26 ಉಪಪಂಗಡಗಳ ಅಧಿಕಾರಿ ನೌಕರರು ಒಂದಾಗುವ ತುರ್ತು ಮತ್ತು ಅನಿವಾರ್ಯತೆ ನಮಗಿದೆ.
ಸಂಘದ ಬೈಲಾವನ್ನು ತಮ್ಮೆಲ್ಲರ ಜೊತೆ ಮುಕ್ತವಾಗಿ ಹಂಚಿಕೊಂಡಂತೆ, ನೌಕರ ಸಂಘಟನೆಯ ವ್ಯಾಪ್ತಿಯಲ್ಲಿ ಹಾಲಿ ಮತ್ತು ನಿವೃತ್ತ ಸರ್ಕಾರಿ ಅಧಿಕಾರಿ-ನೌಕರ ಬಾಂಧವರು, ವಕೀಲರು, ಅಭಿಯಂತರರು, ವೈದ್ಯರು ಮುಂತಾದ ವೃತ್ತಿಪರರನ್ನು ತರಲಾಗಿದೆ.
ಮೊದಲ ಮತ್ತು ಎರಡನೇ ತಲೆಮಾರಿನ ನಾವು ನೌಕರರು ಅಥವಾ ಅಧಿಕಾರಿಗಳಾಗಿರಬಹುದು. ನಮ್ಮ ಮೂರನೇ ತಲೆಮಾರಿನ ನೌಕರರು-ಅಧಿಕಾರಿಗಳ ಮಕ್ಕಳು ಇತ್ತೀಚೆಗೆ ಅಭಿಯಂತರರು, ವೈದ್ಯರು, ವೃತ್ತಿಪರ ಉದ್ಯಮಿಗಳಾಗುತ್ತಿರುವ ಈ ಸಂದರ್ಭದಲ್ಲಿ, ಹೆಚ್ಚುದುಡಿಯುತ್ತಿರುವ ಅವರು ನಮ್ಮ ಸಮಾಜಕ್ಕೆ ಮತ್ತು ಕ್ಷೇಮಾಭಿವೃದ್ಧಿಸಂಘಕ್ಕೆ ಬಹುದೊಡ್ಡ ಆಸ್ತಿಯೇ ಆಗಿರುವುದರಿಂದ ಅವರನ್ನು ಕ್ಷೇಮಾಭಿವೃದ್ಧಿಸಂಘದ ವ್ಯಾಪ್ತಿಗೆ ತರಲಾಗಿದೆ.
ಈಗಿರುವ ಜಿಲ್ಲಾ-ತಾಲೂಕು ನೌಕರರ ಕ್ಷೇಮಾಭಿವೃದ್ಥಿ ಸಂಘಗಳು ಸಾಲದೇ? ಶ್ರೀನಾರಾಯಣ ಗುರು ಹೆಸರಿನ ಸಂಘಗಳು, ಆರ್ಯ ಈಡಿಗ ಸಂಘ, ಅದರ ಉಪ ಶಾಖೆಗಳು ಇಲ್ಲವೇ? ಸಾಕಲ್ಲವೇ? ಎಂಬ ಪ್ರಶ್ನೆಯನ್ನು ಹಲವರು ಎತ್ತಿದ್ದೀರಿ. ಈಗಾಗಲೇ ಹಾಲಿ ಇರುವ ಎಲ್ಲಾ ಸಂಘಗಳು ಇರುತ್ತವೆ. ಅವು ಹಾಗೆಯೇ ಮುಂದುವರಿಯುತ್ತವೆ. “ಇದು ಅಧಿಕಾರಿ ನೌಕರರ ರಾಜ್ಯ ಮಟ್ಟದ ಸಂಘ”. ರಾಜ್ಯ ಮಟ್ಟದಲ್ಲಿ ಬಲಯುತವಾಗಿ ಪ್ರತಿಧ್ವನಿಸಿ, ಆ ಪ್ರತಿಧ್ವನಿ ರಾಜ್ಯ, ಜಿಲ್ಲೆ, ತಾಲ್ಲೂಕುಗಳಲ್ಲಿ ಮೊಳಗುತ್ತದೆ, ಆದ್ದರಿಂದ ಸಂಘ ಯಾವುದೇ ರೀತಿಯೆ ಆಗಲಿ ಅದು ಸಂಘ. ಆದರೆ ಅದು ನಾಮಕಾವಸ್ತೆಯಾಗದೆ ಕ್ರಿಯಾಶೀಲವಾಗಿ ಸರ್ವರನ್ನು ತೊಡಗಿಸಿಕೊಳ್ಳುವಿಕೆಯಲ್ಲಿ ಇನ್ನಷ್ಟು ಬಲಯುತವಾಗಲಿ ಎಂಬುದು ನಮ್ಮೆಲ್ಲರ ಬಯಕೆ.
“ಒಂದು ಸಂಘ ಇನ್ನೊಂದಕ್ಕೆ ಪೂರಕ, ಪ್ರೇರಕ, ಸಹಾಯಕ ಆಗಿರಬೇಕೆ ಹೊರತು ಮಾರಕ ಆಗಬಾರದು”
ನಮ್ಮವರಿಗೆ ಹತ್ತು ಹಲವು ವಿಧದಲ್ಲಿ, ಅದಮ್ಯ ಚೈತನ್ಯ ಶಕ್ತಿ ಪರಮಪೂಜ್ಯ ಶ್ರೀ ನಾರಾಯಣ ಗುರುಗಳು. ಅವರು ಅಪ್ರತಿಮ ಸಮಾಜ ಸುಧಾರಕರು, ಸಮಾಜೋದ್ಧಾರಕರು, ಸಾರ್ವತ್ರಿಕವಾಗಿ ಒಪ್ಪಿಗೆಯಾಗಬಲ್ಲವರು. ಗುರುಗಳೇ ನಮಗೆ ನಿಜವಾದ “ಸ್ಫೂರ್ತಿಯ ಮೂರ್ತಿ ”, ಅವರ ಅಡಿಯಲ್ಲಿ ಮತ್ತು ನಾಮಬಲದಲ್ಲಿ ನಾವು ಸಂಘಟಿತರಾಗಬೇಕು.
ಇಂತಹ ಗುರುಗಳು ಬೇರೆಯವರಿಗೇನಾದರೂ ದೊರಕಿದ್ದರೆ ಇದರ ಪರಿಣಾಮ ಬೇರೆಯೇ ಆಗಿರುತ್ತಿತ್ತು . ಆದರೆ ಇತ್ತೀಚೆಗೆ ನಮ್ಮವರಿಗೆ ಅವರ ಮಹತ್ವ ಅರಿವಾಗುತ್ತಿದೆ, ಅವರ ‘ಧೀ: ಶಕ್ತಿ’ ಒಗ್ಗಟ್ಟನ್ನು ಮೂಡಿಸುತ್ತಿದೆ ಮತ್ತು ಸಕಾರಾತ್ಮಕ ಬೆಳವಣಿಗೆ ತಂದಿದೆ. ಹೀಗೆ ಹತ್ತು-ಹಲವು ಹಿನ್ನೆಲೆ, ಸಾಂಸ್ಕ್ರತಿಕ ಬೇರುಗಳನ್ನು ಗಟ್ಟಿಯಾಗಿ ಉಳ್ಳ ನಮ್ಮ ಸಮುದಾಯದ ನೌಕರ ಬಾಂಧವರು ಒಗ್ಗಟ್ಟು ಮತ್ತು ಶಕ್ತಿ ಸಾಮರ್ಥ್ಯವನ್ನು ಸಂಘದ ಮೂಲಕ ತೋರ್ಪಡಿಸಿ, ಎಲ್ಲಾ ಕ್ಷೇತ್ರಗಳಲ್ಲೂ ನಾವು ಸಬಲರಾಗಬೇಕು ಮತ್ತು ಆ ನಿಟ್ಟಿನಲ್ಲಿ ನಮ್ಮವರನ್ನು ಪ್ರೇರೇಪಿಸಬೇಕು.
ನಾವು ಎಷ್ಟೇ ಸಬಲರಾಗಿದ್ದೇವೆಂದರೂ ಅದು ಶೇಕಡಾ 30 ಮಾತ್ರ . ಇನ್ನುಳಿದ ಶೇಕಡಾ 70 ರಷ್ಟು ಇರುವ ನಮ್ಮ ಬಾಂಧವರು, ನಮ್ಮ ಬಾಂಧವರ ಮಕ್ಕಳು, ಭೂರಹಿತರು, ಕೂಲಿಕಾರ್ಮಿಕರು, ಅತಿ ಸಣ್ಣ ಹಿಡವಳಿದಾರರು, ಹಿನ್ನೆಲೆಯಿಲ್ಲದವರು, ಮುಖ್ಯವಾಹಿನಿಗೆ ಬರದಿದ್ದವರು ಆಗಿದ್ದಾರೆ.
ಅವರೆಲ್ಲ ಮುಖ್ಯವಾಹಿನಿಗೆ ಬರುವವರೆಗೆ ಸರ್ಕಾರದ ಯೋಚನೆ, ಯೋಜನೆ. ಪ್ರೋತ್ಸಾಹಧನ, ಅನುದಾನಗಳನ್ನೂ ಅವರತ್ತ ತಿರುಗಿಸಲು, ಅವರಿಗೆ ಸಾಮರ್ಥ್ಯಾಧಾರಿತ ಶಿಕ್ಷಣ, ಸ್ವಾವಲಂಬಿ ಬದುಕು, ಯಾಂತ್ರಿಕ- ವೈಜ್ಞಾನಿಕ ಕೃಷಿ, ಉದ್ಯಮ, ಸಂಘ ಸಂಸ್ಥೆಗಳಲ್ಲಿ ಭೂಮಿಕೆಯನ್ನು ಸಾಧ್ಯವಾಗಬಹುದಾದ ಎಲ್ಲಾ ವಿಧದಲ್ಲೂ ಒದಗಿಸಿ, ಇದನ್ನು ತಮ್ಮೆಲ್ಲರ ಸಹಕಾರ ಸಲಹೆ ಸೂಚನೆಗಳಿಂದ ಸಾಧಿಸಲು ನಾನು ಉತ್ಸುಕನಾಗಿದ್ದೇನೆ.