ಪ್ರಮುಖ ಮೌಲ್ಯಗಳು:
ಅತ್ರಿ ಮಹರ್ಷಿಯ ಗೌಡಮಂತ್ರದ ಪ್ರಭಾವದ ಮೂಲಕ ಈಡಿಗ ಜಾತಿಯ ಮೂಲ ಪುರುಷನು ಸೃಷ್ಟಿಯಾಗಿರುವ ಕಾರಣ ಇವರಿಗೆ ಗೌಡರು, ಗೌಳರು, ಈಡಿಗರು ಎಂಬ ಹೆಸರು ಬಂತು. ವರುಣನ ಮಗಳಾದ ವಾರುಣಿದೇವಿ (ಸುರೆ) ಇವರ ಕುಲದೇವತೆ. ಅತ್ರಿ ಮಹರ್ಷಿಯು ಗೌಡ ಮಂತ್ರದ ಮೂಲಕ ಕೌಂಡಿನ್ಯನೆಂಬ ಮುನಿಶ್ರೇಷ್ಠನನ್ನು ಸೃಷ್ಟಿಸಿದನು. ಕೌಂಡಿನ್ಯ ಮಹರ್ಷಿಯು ತಂದೆಯ ಆಶೀರ್ವಾದ ಪಡೆದು ತನ್ನ ತಪಶ್ಯಕ್ತಿಯಿಂದ ಫಲ ನೀಡುವ ವೃಕ್ಷಗಳನ್ನೂ, ಗಿಡ ಮೂಲಿಕೆಗಳನ್ನೂ ಸೃಷ್ಟಿಸಿ, ಅದರ ಮಧುರವಾದ ರಸದಿಂದ ಸೋಮರಸವನ್ನು ತಯಾರಿಸಿ ಅದರ ಮೂಲಕ ಮಾನವರ ರೋಗ ಬಾಧೆಗಳನ್ನು ನಿವಾರಿಸಿದನು.ಹೀಗೆ ಈ ಋಷಿ ಶ್ರೇಷ್ಠನೇ ಈಡಿಗ (ಗೌಡ) ವಂಶದ ಮೂಲ ಪುರುಷನಾಗಿ ಈ ಜನಾಂಗದ ಗೋತ್ರವಾದನು (ಕೌಂಡಿನ್ಯ ಗೋತ್ರ). ಮುಂದೆ ಈತನು ಪರಮೇಶ್ವರನನ್ನು ತಪಸ್ಸಿನಿಂದ ಮೆಚ್ಚಿಸಿ ಕಲ್ಪವೃಕ್ಷವನ್ನೂ ಸೃಷ್ಟಿ ಮಾಡುವ ವರವನ್ನು ಪಡೆದನು. ವರ ನೀಡಿದ ಪರಮೇಶ್ವರನು ಕಲ್ಪವೃಕ್ಷ ರಸಪಾನ ಮಾಡಿದವರಿಗೆ ಪುನರ್ಜನ್ಮ ಉಂಟಾಗದಿರಲಿ ಎಂಬ ಅಭಯವನ್ನು ಕರುಣಿಸಿದನು. ಆದಿರುದ್ರನ ಎಡಪಾದದಲ್ಲಿ ಮಧು ಕರ್ಮಣರೆಂಬುವರು ಹುಟ್ಟಿದರು. ಇವರು ಕೂಡ ಈಡಿಗ ವಂಶದ ಮೂಲ ಪುರುಷರೆಂಬ ವ್ಯಾಖ್ಯಾನ ‘ರುದ್ರಭಾರತ’ದಲ್ಲಿದೆ.
ಇನ್ನೊಂದು ಪುರಾಣ ಕಥೆಯ ಪ್ರಕಾರ ಪಾರ್ವತಿ ಪರಮೇಶ್ವರರು ವಿಹಾರಾರ್ಥವಾಗಿ ಭೂಲೋಕಕ್ಕೆ ಬಂದಿಳಿದಿದ್ದರು. ಅದೊಂದು ವೈಶಾಖ ಮಾಸದ ಹುಣ್ಣಿಮೆಯ ದಿನ ಪಾರ್ವತಿಗೆ ತೃಷೆಯಾಗಿತ್ತು. ಸುತ್ತ ಎಲ್ಲೂ ನೀರಿನ ಮೂಲಗಳಿರಲಿಲ್ಲ. ತಾಳೆ, ಈಚಲು ಮರಗಳು ಸೊಗಸಾಗಿ ಬೆಳೆದು ನಿಂತ ಗುಂಪೊಂದು ಕಾಣಿಸಿತು. ಆ ಮರಗಳ ಕಾಂಡದೊಳಗಿನಿಂದ ಸ್ರವಿಸಬಹುದಾದ ರಸದಿಂದ ತೃಷೆ ನೀಗಿಸಿಕೊಳ್ಳಬಹುದೆಂದು ಪಾರ್ವತಿ ಪತಿಯಲ್ಲಿ ವಿನಂತಿಸಿದಳು. ಅದೇ ಸಮಯಕ್ಕೆ ಬಳೆಗಾರ ಬಣಜಿಗನೊಬ್ಬ ಅದೇ ಮಾರ್ಗವಾಗಿ ಬರುತ್ತಿದ್ದ. ಆತನನ್ನು ನೋಡಿದ ಪರಮೇಶ್ವರ, ‘ಅಯ್ಯಾ, ನನ್ನ ಪತ್ನಿ ಬಾಯಾರಿ ಬಹಳ ದಣಿದಿದ್ದಾಳೆ. ಅಲ್ಲಿ ಕಾಣುವ ಮರದ ಕಾಂಡವನ್ನು ಈ ಆಯುಧದಿಂದ ಮೆತ್ತಗೆ ಸೀಳಿ ಅದರಿಂದ ಬರುವ ರಸವನ್ನು ತಂದು ಕೊಡು.ನಿನಗೆ ಪುಣ್ಯ ಲಭ್ಯವಾಗುವುದು’ ಎಂದು ಹೇಳಿ ಒಂದು ಸಣ್ಣ ಚೂಪನೆಯ ಆಯುಧವನ್ನು ಕೊಟ್ಟನು. ಬಳೆಗಾರನು ಈಚಲ ಮರದ ಕಾಂಡದಿಂದ ರಸವನ್ನು ಶೇಖರಿಸಿ ಭಕ್ತಿಯಿಂದ ಪಾರ್ವತಿಗೆ ಅರ್ಪಿಸಿದನು. ಈಚಲ ರಸವನ್ನು ಈಶ್ವರ ಪಾರ್ವತಿಯರಿಬ್ಬರೂ ಸೇವಿಸಿ ಸಂತುಷ್ಟರಾದರು. ನಂತರ ಬಳೆಗಾರನಿಗೆ ‘ನೀನು ಇದೇ ಉದ್ಯೋಗವನ್ನು ಮುಂದುವರಿಸು. ಇದರಿಂದ ನಿನ್ನ ಹಾಗೂ ನಿನ್ನ ಮುಂದಿನ ಪೀಳಿಗೆ ಉತ್ತರೋತ್ತರ ಅಭಿವೃದ್ಧಿ ಹೊಂದಲಿ’ ಎಂದು ಹರಸಿದರು. ಅಂದಿನಿಂದ ಈಡಿಗರ ವಂಶ ಪ್ರಾರಂಭವಾಯಿತು… ಇದು ಇನ್ನೊಂದು ಪ್ರತೀತಿ. ಈ ಘಟನೆ ಹಾಸನದ ಗೊರೂರು (ಗೊರವರ ಊರು) ಎಂಬಲ್ಲಿ ನಡೆಯಿತು ಎನ್ನುವ ಇನ್ನೊಂದು ಮಾಹಿತಿ “ಕ್ಯಾಸ್ಟ್ ಅಂಡ್ ಟ್ರೈಬ್ಸ್ ಆಫ್ ಸದರನ್ ಇಂಡಿಯಾ” ಎಂಬ ಗ್ರಂಥದಲ್ಲಿದೆ. “ಬ್ರಾಹ್ಮಣೋತ್ಪತ್ತಿ ಮಾರ್ತಾಂಡ” ಗ್ರಂಥದ ಉಲ್ಲೇಖವೊಂದರ ಪ್ರಕಾರ ಜನಮೇಜಯರಾಯನು ವಟೇಶ್ವರ ಮುನಿಯನ್ನು ಆಮಂತ್ರಿಸಿ ಒಂದು ಯಜ್ಞವನ್ನು ಮಾಡಿಸಿದ. ಯಜ್ಞ ಮುಗಿದ ಬಳಿಕ ವಟೇಶ್ವರ ಮುನಿಯು 1888 ಶಿಷ್ಯರುಗಳಿಗೆ ತಲಾ ಒಂದೊಂದು ಗ್ರಾಮದಂತೆ ದಾನ ಮಾಡಿದ. ಇವರೆಲ್ಲ ಆರ್ಯಾವರ್ತದಲ್ಲಿ ನೆಲೆಸಿದರು. ಮುಂದೆ ಇವರೇ ಆದಿಗೌಡರಾದರು ಹಾಗೂ ಇವರೇ ಗೌಡ ವಂಶದ ಮೂಲ ಪುರುಷರು ಎಂಬುದು ಮತ್ತೊಂದು ಐತಿಹ್ಯ. ಇದಲ್ಲದೆ ಮೂಲತಃ ಈಡಿಗರು ಬ್ರಾಹ್ಮಣರಾಗಿದ್ದು ಧರ್ಮವಿರುದ್ಧದ ಆಚರಣೆಗಳನ್ನು ಮಾಡಿರುವ ಕಾರಣ ಬ್ರಾಹ್ಮಣರಿಂದಲೇ ಬಹಿಷ್ಕರಿಸಲ್ಪಟ್ಟರು ಎಂಬುದು ಕೂಡ ಒಂದೆರಡು ಪುರಾಣಗಳಲ್ಲಿ ಕಾಣಿಸುತ್ತದೆ.
ಕಾಟಮಗೌಡನೇ ಕುಲಗುರು: ಕೌಂಡಿನ್ಯ ಮುನಿಯ ವಂಶಸ್ಥರಾದ ಗೋಪವಾಶ್ವ ಮತ್ತು ಕಲ್ಯಾಣಿ ದಂಪತಿಗಳಿಗೆ ಗೋಪಾಲಗೌಡನೆಂಬ ಪುತ್ರ ಸಂತತಿಯಾಯಿತು. ಗೋಪಾಲಗೌಡನು ವೀರಮಾಂಬೆ ಎಂಬ ಕನ್ಯೆಯನ್ನು ವರಿಸಿದನು. ಈ ದಂಪತಿಗಳ ಸುಪುತ್ರನೇ ಕಾಟಮಗೌಡನು. ಶಿವಭಕ್ತನೂ,ದಾನಿಯೂ, ತಪೋನಿರತನು ಆಗಿದ್ದ ಕಾಟಮಗೌಡನೇ ಕಲಿಯುಗದ ಗೌಡವಂಶಕ್ಕೆ ಕುಲಗುರು (ಶಿವತತ್ವಸಾರ –ಶಿವನಂದೀಶ್ವರ ಸಂವಾದ). ಇವನಿಗೆ ಕಂಠಮಯ, ಕಾಟಮಯ, ಕಾಟಮಗೌಡ, ಕಾಟಮಹೇಶ್ವರ ಎಂಬ ಇತರ ಹೆಸರುಗಳೂ ಇವೆ.ಗೋಪಾಲಗೌಡನು ವಿದರ್ಭದ ರಾಜನಾಗಿದ್ದನು.ಶಿವಭಕ್ತನಾದ ಈತನು ಅನೇಕ ವರ್ಷಗಳ ಕಾಲ ರಾಜ್ಯಭಾರ ಮಾಡಿ, ತನ್ನ ವೃದ್ಧಾಪ್ಯದಲ್ಲಿ ಸಂಸಾರ ತ್ಯಾಗ ಮಾಡಿ ಮೋಕ್ಷ ಪ್ರಾಪ್ತಿಗಾಗಿ ಶಿವನನ್ನು ಕುರಿತು ತಪಸ್ಸು ಮಾಡಲು ಹಿಮಾಲಯಕ್ಕೆ ತೆರಳಿದನು.ಗೋಪಾಲಗೌಡನ ಉತ್ತರಾಧಿಕಾರಿಯಾಗಿ ಕಾಟಮಗೌಡನು ಸಿಂಹಾಸನವೇರಿದನು. ಕಾಟಮಗೌಡನು ಕೂಡ ತನ್ನ ರಾಜ್ಯಭಾರದ ಕೈಂಕರ್ಯದ ಜತೆ ತನ್ನ ತಪಶ್ಯಕ್ತಿಯಿಂದ ಕಲಿಯುಗದ ಕಲ್ಪವೃಕ್ಷಗಳೆಂದು ಪ್ರಸಿದ್ಧಿಯಾದ ತಾಳೆ ಮುಂತಾದ ಮರಗಳು ತಾವಾಗಿ ಭೂಮಿಗೆ ತಲೆ ಬಾಗುವಂತೆ ಮಾಡಿ ಅದರಿಂದ ಜನರು ಸೋಮರಸವನ್ನು ತೆಗೆದು ವ್ಯವಹಾರ ನಡೆಸುವ ಕಾಯಕಕ್ಕೆ ಕಾರಣನಾದ.ಕಾಟಮಗೌಡನು ತನ್ನ ಕುಲದ ಮೂಲಪುರುಷನಾದ ಕೌಂಡಿನ್ಯ ಮಹರ್ಷಿಯ ಹೆಸರು ಚಿರಸ್ಥಾಯಿಯಾಗಬೇಕೆಂದು ಹಿಮಾಲಯದಿಂದ ಶಿವಲಿಂಗವನ್ನು ತಂದು, ಮುಕ್ತಾಪುರ (ಈಗಿನ ಅನಂತಪುರ ಜಿಲ್ಲೆಗೆ ಸೇರಿದ ಒಂದು ಗ್ರಾಮ) ಎಂಬಲ್ಲಿ 18 ಆವರಣಗಳುಳ್ಳ ದೇವಸ್ಥಾನವನ್ನು ನಿರ್ಮಾಣ ಮಾಡಿ ಪ್ರತಿಷ್ಠಾಪನೆ ಮಾಡಿದ.ಅಲ್ಲಿಯೇ ಒಂದು ಆಶ್ರಮವನ್ನು ಸ್ಥಾಪಿಸಿ ಅದಕ್ಕೆ ಕೌಂಡಿನ್ಯಾಶ್ರಮವೆಂದು ನಾಮಕರಣ ಮಾಡಿದ. ಕಾಟಮಗೌಡನು ಮುಂದೆ ಇಲ್ಲಿಯೇ ಇದ್ದು ಕಾಟಮ ಮಹೇಶ್ವರ, ಕಾಟಮ ಋಷೀಶ್ವರ ಎಂದು ಪ್ರಸಿದ್ಧನಾದ, ಶಿವಲೀಲಾ ಮಹಾತ್ಮೆ, ಶಿವತತ್ವಸಾರ ಮೊದಲಾದ ಕೃತಿಗಳನ್ನು ರಚಿಸಿದ. ನಂತರ (ವೃದ್ಧಾಪ್ಯದಲ್ಲಿ) ತನ್ನ 3000 ಶಿಷ್ಯರುಗಳನ್ನು ಇದೇ ಆಶ್ರಮದಲ್ಲಿ ಬಿಟ್ಟು ರಾಜ್ಯಭಾರದ ಜವಾಬ್ದಾರಿಯನ್ನು ತನ್ನ ತಂದೆಯ ಕಡೆಯ ಬಂಧುವಾದ ವೀರಭೋಜನಿಗೆ ಒಪ್ಪಿಸಿ ಮೋಕ್ಷಪ್ರಾಪ್ತಿಗಾಗಿ ಹಿಮಾಲಯಕ್ಕೆ ತೆರಳಿದ. (ಈತನ ಕಾಲಮಾನ ಮಹಾಭಾರತದ ಯುದ್ಧ ನಂತರದ ಕಲಿಯುಗದ ಪ್ರಾರಂಭದ ಶತಮಾನವೆಂದು ಕೆಲವು ಗ್ರಂಥಗಳಲ್ಲಿ ಅಭಿಪ್ರಾಯಪಡಲಾಗಿದೆ).
ಈಡಿಗರನ್ನು ಕೃತಯುಗದಲ್ಲಿ ದೇವಗೌಡರೆಂದೂ, ತ್ರೇತಾಯುಗದಲ್ಲಿ ಆದಿ ಗೌಡರೆಂದೂ, ದ್ವಾಪರಯುಗದಲ್ಲಿ ಶಿವಗೌಡರೆಂದೂ, ಕಲಿಯುಗದ ಆದಿಯಲ್ಲಿ ಸತ್ಯಗೌಡರೆಂದು ಕರೆಯುತ್ತಿದ್ದರು. ಆದಿ ಶಂಕರಾಚಾರ್‍ಯ ಮಂಡನಮಿಶ್ರನ ಮನೆಗೆ ಪ್ರವೇಶಿಸುವ ಸಂದರ್ಭದಲ್ಲಿ ಈಡಿಗನೊಬ್ಬನಿಂದ ಗೌಡಮಂತ್ರದ ಉಪದೇಶ ಪಡೆದಿರುವನೆಂದೂ ಐತಿಹ್ಯವಿದೆ. ಇವೆಲ್ಲ ಪುರಾಣೋಕ್ತ ಸಂಗತಿಗಳು. ವೈಜ್ಞಾನಿಕ ದಾಖಲೆಗಳನ್ನು ಆಧರಿಸಿದ ಸಂಗತಿಗಳಲ್ಲ. ನಮಗೂ ಪೌರಾಣಿಕ ಹಿನ್ನೆಲೆ ಇದೆ ಎಂಬುದು ಹೆಮ್ಮೆಪಡುವ ವಿಷಯ.