ಶ್ರೀ ಬಿ .ಜನಾರ್ದನ ಪೂಜಾರಿ

ಕರಾವಳಿ ಭಾಗದ ಬಿಲ್ಲವ ಸಮುದಾಯದ ಪ್ರಶ್ನಾತೀತ ನಾಯಕರೆಂದು ಗುರುತಿಸಿಕೊಂಡ ಜನಾರ್ಧನ ಪೂಜಾರಿಯವರು ದಕ್ಷ, ಪ್ರಾಮಾಣಿಕ ,ಪಕ್ಷನಿಷ್ಠ ರಾಜಕಾರಣಿಯಾಗಿ ಮಾದರಿ ರಾಜಕೀಯ ಜೀವನ ಸವೆಸಿದವರು.. ಮಂಗಳೂರು ಲೋಕಸಭಾ ಕ್ಷೇತ್ರದಿಂದ ಹಲವು ಬಾರಿ ಸಂಸದರಾಗಿ, ಕೇಂದ್ರ ಸಚಿವರಾಗಿ, ಗಾಂಧಿ ಕುಟುಂಬದ ಮೂರು ತಲೆಮಾರುಗಳ ನಿಕಟ ಸಂಪರ್ಕ ಹೊಂದಿದ ಪ್ರಾಮಾಣಿಕ ವ್ಯಕ್ತಿಯಾಗಿದ್ದರು. ಬ್ಯಾಂಕುಗಳ ಮೂಲಕ ಬಡವರಿಗೆ ಸಾಲ ನೀಡುವಂತಹ  ಯೋಜನೆ ಜಾರಿಗೊಳಿಸಿದ ಕೀರ್ತಿ ಪೂಜಾರಿ ಅವರಿಗೆ ಸಲ್ಲುತ್ತದೆ. ನಾರಾಯಣ ಗುರುಗಳ ಅಪ್ಪಟ ಅನುಯಾಯಿಯಾಗಿ ಜಾತಿವಾದ, ಕಂದಾಚಾರ, ಮೂಢನಂಬಿಕೆಗಳನ್ನ ವಿರೋಧಿಸುತ್ತಿದ್ದರು. ಕುದ್ರೋಳಿ ಗೋಕರ್ಣನಾಥ ದೇವಾಲಯ ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಶ್ರಮವಹಿಸಿದವರು. ನಾರಾಯಣ ಗುರುಗಳ ಸಂದೇಶ ಸಾರುವ ನಿಟ್ಟಿನಲ್ಲಿ ಕರಾವಳಿ ಭಾಗದಲ್ಲಿ ಸಾಕಷ್ಟು ಶ್ರಮವಹಿಸಿದ ಕೀರ್ತಿ ಜನಾರ್ಧನ ಪೂಜಾರಿ ಅವರಿಗೆ ಸಲ್ಲುತ್ತದೆ.

ಶ್ರೀ ಎಚ್‌. ಜಿ. ರಾಮುಲು

ಕಲ್ಯಾಣ ಕರ್ನಾಟಕ ಭಾಗದ ಹಿರಿಯ ರಾಜಕಾರಣಿ, ಸಮಾಜ ಸೇವಕ, ಮಾಜಿ ಲೋಕಸಭಾ ಸದಸ್ಯರಾದ ಶ್ರೀ ಎಚ್‍.ಜಿ. ರಾಮುಲು ಅವರು ತಮ್ಮ ಪಕ್ಷದ  ನಿಷ್ಠಾವಂತ ನಾಯಕರಾಗಿದ್ದರು. ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ರಾಮುಲು ರವರು ತಮ್ಮ ಅವಧಿಯಲ್ಲಿ ಸಾಕಷ್ಟು ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದರು.. ಬಳ್ಳಾರಿ ಆರ್ಯಈಡಿಗ ಗೌನ ಮಹಾಸಭಾದ ಅಧ್ಯಕ್ಷರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಕೊಡುಗೈ ದಾನಿಯಾಗಿ, ಆಧ್ಯಾತ್ಮಿಕ ಚಿಂತಕರಾಗಿ, ಹಲವು ದೇವಸ್ಥಾನಗಳ ನಿರ್ಮಾಣ ಹಾಗೂ ದೇಣಿಗೆ ನೀಡುವುದರ ಮೂಲಕ ಧರ್ಮಕರ್ತರು ಎನಿಸಿಕೊಂಡಿದ್ದಾರೆ.

ಶ್ರೀ ಆರ್.ಎಲ್. ಜಾಲಪ್ಪನವರು

ಯಶಸ್ವಿ ಕೃಷಿಕರು, ರಾಜಕಾರಣಿಯಾಗಿ, ಉದ್ಯಮಿಯಾಗಿ, ಸಮಾಜಸೇವಕರಾಗಿ ಶಿಕ್ಷಣ ಪ್ರೇಮಿಗಳಾಗಿದ್ದ ಮಾಜಿ ಕೇಂದ್ರ ಸಚಿವರು ಶ್ರೀ ಜಾಲಪ್ಪನವರು ಜನಾಂಗದ ಸೇವೆಯಲ್ಲಿ ತಮ್ಮದೇ ಆದ ಚಾಪು ಮೂಡಿಸಿದವರು. ಕೋಲಾರ, ದೊಡ್ಡಬಳ್ಳಾಪುರ ಜಿಲ್ಲೆಗಳಲ್ಲಿ  ಅನೇಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಅನೇಕ ಬಡ ವಿದ್ಯಾರ್ಥಿಗಳ    ಭವಿಷ್ಯಕ್ಕೆ ದಾರಿದೀಪವಾದರು. ಸಹಕಾರ ಕ್ಷೇತ್ರದಿಂದ ರಾಜಕೀಯ ಪ್ರವೇಶಿಸಿದ ಜಾಲಪ್ಪನವರು ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಹಿಡಿತವನ್ನು ಹೊಂದಿದ್ದರು. ಶಾಸಕರಾಗಿ, ಸಚಿವರಾಗಿ, ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಸಹಕಾರಿ ಕ್ಷೇತ್ರಗಳಲ್ಲಿ ಪರಿಶಿಷ್ಟರಿಗೆ ಮೊದಲ ಬಾರಿಗೆ ಮೀಸಲಾತಿ ತಂದರು.ಕೃಷಿ ಸಾಲ ಮನ್ನಾ ಮಾಡುವ ಯೋಜನೆಯನ್ನು ಜಾರಿಗೊಳಿಸಿದರು.ಅವರ ಹೆಸರಿನ ಆರ್. ಎಲ್. ಜಾಲಪ್ಪ ಅಕಾಡೆಮಿ ಸೋಲುರಿನಲ್ಲಿ ಪ್ರಾರಂಭವಾಗಿದ್ದು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಈಡಿಗ ಜನಾಂಗದ ಯುವಕ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಸೇವೆಗೆ ಸೇರಿ ಬದುಕನ್ನು ರೂಪಿಸಿಕೊಂಡಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ವಿಜಯಲಕ್ಷ್ಮಿ ಜಾಲಪ್ಪ ಹೆಸರಿನಲ್ಲಿ ವಿದ್ಯಾರ್ಥಿ ವೇತನ ನೀಡುವುದರ ಮೂಲಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ.

ಶ್ರೀ ಎಸ್. ಬಂಗಾರಪ್ಪ

ಬಂಗಾರಪ್ಪನವರೆಂದರೆ ಕರ್ನಾಟಕ ರಾಜ್ಯದ ರಾಜಕಾರಣದಲ್ಲಿ ವರ್ಣರಂಜಿತ ರಾಜಕಾರಣಿಯೆಂದೇ ಗುರುತಿಸಿಕೊಂಡವರು. ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಕಬಟೂರಿನ ರೈತ ಕುಟುಂಬದಲ್ಲಿ ಜನಿಸಿದ ಬಂಗಾರಪ್ಪನವರದು ಜೀವನದುದ್ದಕ್ಕೂ ಬಡವರ ಪರವಾದ ಹೋರಾಟದ ರಾಜಕಾರಣ. ಬಿ.ಎ, ಎಲ್. ಎಲ್. ಬಿ ವ್ಯಾಸಂಗದ ನಂತರ ವಕೀಲ ವೃತ್ತಿ ಕೈಗೊಂಡ ಬಂಗಾರಪ್ಪನವರು ಸಮಾಜವಾದಿ ನಾಯಕರಾದ ಶಾಂತವೇರಿ ಗೋಪಾಲಗೌಡರ ಪ್ರಭಾವದಿಂದ ಸೋಶಿಯಲಿಸ್ಟ್ ಚಳುವಳಿಯಲ್ಲಿ ಧುಮುಕಿದರು. 1967 ರಲ್ಲಿ ಮೊದಲ ಬಾರಿಗೆ ಸೊರಬದಿಂದ ಶಾಸನಸಭೆಗೆ ಆಯ್ಕೆಯಾದರು. ಅಂದಿನಿಂದ ಹಿಂತಿರುಗಿ ನೋಡದೆ, ಸೋಲಿಲ್ಲದ ಸರದಾರ ನೆಂದೆ ಖ್ಯಾತಿಯಾಗಿದ್ದರು. ಅನೇಕ ಪಕ್ಷಗಳನ್ನು ಬದಲಿಸಿದರು ಕೂಡ ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ಹಿಡಿತ ಹೊಂದಿದ್ದರು. ಕ್ರಾಂತಿರಂಗ, ಜನತಾರಂಗ, ಕರ್ನಾಟಕ ವಿಕಾಸ ಪಕ್ಷ, ಕರ್ನಾಟಕ ಕಾಂಗ್ರೆಸ್ ಪಕ್ಷ, ಸಮಾಜವಾದಿ ಪಕ್ಷ ಹೀಗೆ ನಾನಾ ಪಕ್ಷಗಳನ್ನು ಕಟ್ಟಿ ಅನೇಕ ಪಕ್ಷಗಳನ್ನು ಸೇರಿದರು ಕೂಡ ರಾಜ್ಯ ರಾಜಕಾರಣದಲ್ಲಿ ಪ್ರಭಾವಿಯಾಗಿದ್ದರು. ಶಾಸಕರಾಗಿ, ಸಂಸದರಾಗಿ, ಸಚಿವರಾಗಿ, ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಆಗಿ ಜನಪರ ಆಡಳಿತ ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಕರ್ನಾಟಕ ರಾಜ್ಯದ ಈಡಿಗ ಜನಾಂಗದ ಅಸ್ಮಿತೆಯಾಗಿ ಗುರುತಿಸಿಕೊಂಡಿದ್ದಾರೆ.

ಶ್ರೀ ಕಾಗೋಡು ತಿಮ್ಮಪ್ಪ

ಮಲೆನಾಡಿನ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕಾಗೋಡು ಎಂಬ ಹಳ್ಳಿಯಲ್ಲಿ ರೈತ ಕುಟುಂಬದಲ್ಲಿ ಜನಿಸಿದ ತಿಮ್ಮಪ್ಪನವರದು ಹೋರಾಟದ ಬದುಕು. ಬಿಕಾಂ, ಎಲ್ ಎಲ್ ಬಿ ಪದವಿಗಳಿಸಿ ವಕೀಲ ವೃತ್ತಿಯಿಂದ ಹೋರಾಟದ ಸೇವಾ ಕ್ಷೇತ್ರಕ್ಕೆ ಧುಮುಕಿದರು. ಸೋಶಿಯಲಿಸ್ಟ್ ಚಳುವಳಿ ಹಾಗೂ ಗೇಣಿ ರೈತರ ಹೋರಾಟಗಳಲ್ಲಿ ಗುರುತಿಸಿಕೊಂಡವರು. 1972ರಲ್ಲಿ ಶಾಸಕರಾಗಿ ಆಯ್ಕೆಯಾದ ನಂತರ ಕರ್ನಾಟಕ ವಿಧಾನಸಭೆಯನ್ನು ಅನೇಕ ಬಾರಿ ಪ್ರತಿನಿಧಿಸಿ ಸಚಿವರಾಗಿ ಕೂಡ ಕಾರ್ಯನಿರ್ವಹಿಸಿದರು. ತಮ್ಮ ಬದುಕಿನದ್ದಕ್ಕೂ ತತ್ವ ಸಿದ್ಧಾಂತಗಳ ಜೊತೆಯಲ್ಲೇ ಹೋರಾಟ ನಡೆಸಿದ ಕಾಗೋಡು ತಿಮ್ಮಪ್ಪನವರು ಎಂದಿಗೂ ರಾಜಿ ಆದವರಲ್ಲ. ಸೋಲು ಗೆಲುವುಗಳನ್ನು ಸಮಚತ್ತದಿಂದ ಸ್ವೀಕರಿಸಿ ಸೋತಾಗ ಕುಗ್ಗದೆ ,ಗೆದ್ದಾಗ ಹಿಗ್ಗದೆ ಸದಾ ಹೋರಾಟದ ಮನೋಭಾವ ದೊಂದಿಗೆ ಬದುಕಿದ್ದಕ್ಕೂ ಬಡವರ ಸೇವೆಗಾಗಿ ತಮ್ಮ ಜೀವನವನ್ನು ಮೂಡಿಬಿಟ್ಟ ಅಪ್ಪಟ ಮಲೆನಾಡಿನ ಹೋರಾಟಗಾರ. ಮುಂದಿನ ಪೀಳಿಗೆಗೆ ಆದರ್ಶ ಪ್ರಾಯ ವಾಗುವಂತಹ ರಾಜಕಾರಣಿ.